ಧೂಳುಮಣ್ಣು
ಗಟ್ಟಿಗೊಂಡಿರದ ಮತ್ತು ಪದರ ಪದರಾಗಿ ಸೇರಿಕೊಂಡಿರದ ಆದರೆ ಸುಣ್ಣಕಲ್ಲು ಸೇರಿರುವ (ಕಲ್ಕೇರಿಯಸ್) ಹೂಳು (ಲೋಯೆಸ್). ಸರ್ವಸಾಧಾರಣವಾಗಿ ಇದರ ಕಣಗಳು ಒಂದೇ ಗಾತ್ರದವಾಗಿದ್ದು ಬಿಡಿ ಬಿಡಿಯಾಗಿರುತ್ತವೆ. ಮಾಸಲು ಹಳದಿಯಿಂದ ಬೂದುಬಣ್ಣದವರೆಗೆ ದೂಳಿನ ಬಣ್ಣ ಉಂಟು. ಸುಣ್ಣಕಲ್ಲಿನ ಅವಶೇಷಗಳೂ ಪಳೆಯುಳಿಕೆ ಪುಡಿಗಳೂ ಇದರಲ್ಲಿ ಸೇರಿವೆ. ಉತ್ಖನನ ಮಾಡುವಾಗ ದೂಳುಮಣ್ಣಿನ ಸಂಗ್ರಹಗಳು ದೊರೆಯುವುದುಂಟು. ಅಲ್ಲಿ ಇವು ಸ್ಥಿರ ಊಧ್ರ್ವ ಮುಖಗಳನ್ನು ಪ್ರದರ್ಶಿಸುತ್ತವೆ.

ಮುಖ್ಯವಾಗಿ ಉತ್ತರ ಚೀನದ ಷಾನ್‍ಸೀ ಪ್ರಾಂತ್ಯದ ಸುಮಾರು ಐದು ಲಕ್ಷಚದರ ಕಿ.ಮೀ.ಗಳಷ್ಟು ವಿಸ್ತಾರವಾದ ಹುಲ್ಲುಗಾವಲು ಪ್ರದೇಶದಲ್ಲಿ 61 ಮೀ.ಗಳಿಗೂ ಹೆಚ್ಚು ದಪ್ಪದ ಹೊದಿಕೆಯಂತೆ ದೂಳುಮಣ್ಣು ಹಬ್ಬಿಕೊಂಡಿದೆ. ಏಷ್ಯಖಂಡದ ಮಧ್ಯಭಾಗದ ಗೋಬಿ ಮುಂತಾದ ಮರುಭೂಮಿ ಪ್ರದೇಶಗಳು ಅದರ ಮೂಲ. ಅಲ್ಲಿಂದ ಬಿರುಸಾಗಿ ಹೊರಬೀಸುವ ಗಾಳಿ ಫಲವತ್ತಾದ ಈ ದೂಳುಮಣ್ಣನ್ನು ಒಯ್ದು ತಂದು ಈ ಭಾಗದಲ್ಲಿ ಒಟ್ಟಯಿಸಿದೆ. ಚೀನೀ ರೈತರು ಅನೇಕ ಶತಮಾನಗಳಿಂದಲೂ ಈ ಮಣ್ಣಿನ ಎತ್ತರ ಗುಡ್ಡಗಳನ್ನು ಕೊರೆದು ಮಾಡಿದ ಗುಹೆಗಳಲ್ಲಿ ವಾಸವಾಗಿದ್ದಾರೆ. ಇಲ್ಲಿ ದೂಳುಮಣ್ಣಿನ ಮಾರ್ಗಗಳು ದೀರ್ಘಕಾಲದ ಬಳಕೆಯಿಂದಲೂ ಗಾಳಿ ಮಳೆಗಳ ಹೊಡೆತದಿಂದಲೂ ಕಡಿದಾದ ಕಮ್ಮರಿಗಳಾಗಿ ಮಾರ್ಪಟ್ಟಿದೆ. ಈ ಮಣ್ಣಿನ ಹಳದಿ ಬಣ್ಣದ ದೆಸೆಯಿಂದ ಹರಿಯುವ ನದಿಗೆ ಹಳದಿ ನದಿ (ಹ್ಯಾಂಗ್ ಹೋ) ಎಂದೂ ಅದು ಸೇರುವ ಸಮುದ್ರಕ್ಕೆ ಹಳದಿ ಸಮುದ್ರವೆಂದೂ ಹೆಸರು ಬಂದಿವೆ.
ದೂಳುಮಣ್ಣನ್ನು ಯಾಂತ್ರಿಕವಾಗಿ ವಿಶ್ಲೇಷಿಸಿ ಪರೀಕ್ಷಿಸಲಾಗಿದೆ. ಅದರ ಸ್ಥೂಲ ಸಂಯೋಜನೆ ಹೀಗಿದೆ: ಅತಿ ಸೂಕ್ಷ್ಮ ಮರಳು (ಕಣಗಾತ್ರ > 0.074 ಮಿಮೀ), 10% ಹೂಳು (0.074 - 0.005 ಮಿಮೀ) 50% - 85% ಮತ್ತು ಜೇಡಿಮಣ್ಣು (ಕಣಗಾತ್ರ < 0.005 ಮಿಮೀ) 15% - 45% ದೂಳುಮಣ್ಣಿನಲ್ಲಿರುವ ಹೂಳು ಹಾಗೂ ಮರಳು ಘಟಕಗಳಲ್ಲಿ ಈ ಮುಂದಿನ ಖನಿಜಗಳನ್ನು ಗುರುತಿಸಲಾಗಿದೆ: ಕ್ವಾಟ್ರ್ಸ್ 50% - 70% ಫೆಲ್ಡ್‍ಸ್ಟಾರ್ 15% - 30% ಕಾರ್ಬೊನೇಟುಗಳು 0 - 11% ಭಾರ ಖನಿಜಗಳು 15%. 											(ಎಂ. ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ